Friday, July 11, 2008

ಮಾನವ ಚಾಲಿತ ಗಾಡಿ

ಸ್ವಾವಲಂಬನೆ ನೆಲೆಯಲ್ಲಿ ನಾನು ಸೈಕಲನ್ನು ಪ್ರೀತಿಸಿದರೂ ಇಂದಿನ ದೈಹಿಕ ದುರ್ಬಲತೆಯಿಂದ ಸೈಕಲಿನಲ್ಲಿ ಕೂರುವಂತಿಲ್ಲ. ಹಾಗೆಯೇ ಪೆಟ್ರೋಲ್ ಬಳಸುವ ಸದಾಸಂ ನಿತ್ಯವೂ ಉಪಯೋಗಿಸುವುದು ಅನಿವಾರ್ಯವಾಗಿದೆ. ಇವೆರಡನ್ನೂ ಜತೆಗೂಡಿಸಿದಂತಹ ಒಂದು ಕುತೂಹಲಕರವಾದ ವಾಹನ ಜರ್ಮನಿಯಲ್ಲಿ ಅನ್ವೇಷಣೆ ಮಾಡಿದ್ದಾರೆ.


ಇದೊಂದು  ಜರ್ಮನಿಯಲ್ಲಿ    ತಯಾರಾದ   ನಾಲ್ಕು ಚಕ್ರಕ್ಕೂ  ಚಾಲನೆ  ಇರುವ  ಎಲ್ಲೆಡೆ  ಸಾಗಲು  ಸಾದ್ಯವಾಗುವಂತಹ ಗಾಡಿ.  ಒಂದು  ದೊಡ್ಡ    ವಸ್ತು ಪ್ರದರ್ಶನದಲ್ಲಿ  ಇದರನ್ನು  ತೋರಿಸಿದರೂ  ದೊಡ್ದ  ಮಟ್ಟದ  ತಯಾರಿ  ದೂರ    ಇರುವಂತಿದೆ.  ಅಲ್ಲಿ   ಒಬ್ಬ   ವೃತ್ತಿಪರ  ಸೈಕಲಿಗ  ಓಡಿಸಿದ   ಕಾರಣ  ಜನಸಾಮಾನ್ಯರಿಗೆ  ಇದನ್ನು  ತುಳಿಯಲು  ಸಾದ್ಯವೋ   ಅನ್ನುವುದು  ಇನ್ನೂ  ನಿಗೂಡ.   ಅವರ  ಸಾದನೆ  ಮಾತ್ರ  ಖಂಡಿತ  ಮೆಚ್ಚುವಂತದ್ದು.

ಖಾಯಂ  ಆಗಿ  ನಾಲ್ಕು  ಚಕ್ರಕ್ಕೂ  ಚಾಲನೆ,  ಹೈಡ್ರಾಲಿಕ್  ಬ್ರೇಕು  ಮತ್ತು  ಅತ್ಯುತ್ತಮ  ಮಟ್ಟದ  ಸೈಕಲ್  ಗೇರುಗಳ   ಒಳಗೊಂಡ  ಈ ವಾಹನದ  ಬೆಲೆ   ಬಹಳ  ದುಬಾರಿಯಾಗಿರುವ  ಎಲ್ಲ  ಲಕ್ಷಣಗಳಿರುವ  ಕಾರಣ  ನಮಗೆ ಕನಸು  ಕಾಣಬಹುದಾಷ್ಟೇ. 
 
ನಾನು  ಚೀನಾದಿಂದ  ಸದಾಸಂ  ತರಿಸುವ  ಮೊದಲು ಇದಕ್ಕೆ  ಹೋಲಿಕೆಯುಳ್ಳ  ಆದರೆ  ಪುಟ್ಟ  ಇಂಜಿನ್  ಅಳವಡಿಸಿದ   ಒಂದು  ಸರಳ  Go-kart   ಇಲ್ಲಿ  ತಯಾರಿಸುವ  ಬಗ್ಗೆ  ಬಹಳ  ಯೋಚಿಸಿದ್ದೆ.  ಆದರೆ  ಯಾರೂ  ನನ್ನಷ್ಟು  ಆಸಕ್ತಿ  ತೋರಿಸದ  ಕಾರಣ  ಆಲೋಚನೆ  ಬಿಡಬೇಕಾಯಿತು.     ಈಗ   ಗಾಡಿಯ  ಬಗೆಗೆ    ಪ್ರಾಯೋಜಿಕ   ಪರೀಕ್ಷೆಗಳೂ  ನಡೆದಿಲ್ಲ.    ಉಪಯುಕ್ತ   ಎನಿಸುವುದಾದರೆ   ಇದೇ  ಮಾದರಿಯ ಸರಳ ವಾಹನ ನಮ್ಮಲ್ಲಿ  ತಯಾರಿಸಲು ಖಂಡಿತ  ಸಾದ್ಯ. 


ವಿವರಗಳಿಗೆ 
http://www.treehugger.com/files/2008/06/four-wheel-drive-bicycle.php


ಅಲ್ಲೂ  ಉಂಟು ಹಳ್ಳಿಯಿಂದ

Wednesday, July 9, 2008

ಸದಾಸಂ ಮಾರಾಟ ?

ನನಗೆ ಉಪಯೋಗಿಸಲು ಬೇಕಾದದ್ದು ಒಂದು ಸದಾಸಂ. ಇನ್ನೇನು ತರಿಸಲು ಹಣ ಕಳುಹಿಸುವುದು ಎನ್ನುವ ಕೊನೆ ಹಂತದ ಸನ್ನಿವೇಶದಲ್ಲಿ ಅವರು ಹಾಕಿದ ಬಾಂಬು ನಮ್ಮಲ್ಲಿ ಚಿಲ್ಲರೆ ವ್ಯಾಪಾರ ಇಲ್ಲ. ಇವರಿಂದ ಬೇಡ ಎಂದು ನಾನು ಕಾಲು ಹಿಂದೆ ಇಟ್ಟರೆ ನನಗೆ ಆ ಮಳೆಗಾಲದಲ್ಲಿ ಸದಾಸಂ ಉಪಯೋಗ ಮಾಡಿನೋಡಲು ಅಸಾದ್ಯ.

ಸೋಲುತ್ತಿರುವ ದೇಹದಿಂದಾಗಿ ಮಳೆಗಾಲದಲ್ಲಿ ತೋಟಕ್ಕೆ ಹೋಗುವುದು ಕೃಷಿಕನಾಗಿ ಉಳಿವಿನ ಪ್ರಶ್ನೆಯಾಗುತ್ತಲಿತ್ತು. ಗುಣ ದೋಷಗಳನ್ನೆಲ್ಲ ಅವಲೋಕಿಸಿ ಅವರಿಗೆ ಹಣ ಕಳುಹಿಸಿದೆ. ಐದು ಯಂತ್ರಗಳು ನಮ್ಮ ಅಂಗಳದಲ್ಲಿ ಬಂದಿಳಿದವು. ನನಗೆ ಒಂದು ಉಪಯೋಗಕ್ಕೂ ಮತ್ತೊಂದು ಅಗತ್ಯವಾದರೆ ಬಿಡಿ ಬಾಗಗಳಿಗೂ ಇಟ್ಟುಕೊಳ್ಳುವ ಆಲೋಚನೆ ಮಾಡಿದೆ. ಉಳಿದವುಗಳ ಅವುಗಳ ಬಗ್ಗೆ ಅರಿವಿದ್ದ ಹಾಗೂ ಅಗತ್ಯವಿದ್ದವರು ಸಿಕ್ಕರೆ ಕೊಡುವುದೆಂದು ತೀರ್ಮಾನಿಸಿದೆ.

ಚೀನಾ ಮಾಲು. ಹೇಗುಂಟೋ ? ಪ್ರಶ್ನೆಗಳು ನಮ್ಮ ಎದುರಾಗುತ್ತವೆ. ಇದರ ಬಗೆಗೆ ಯಾರೂ ನನ್ನನ್ನು ದೂರುವುದು ನನಗೆ ಬೇಕಿರಲಿಲ್ಲ. ಹಾಗಾಗಿ ಗುಣಮಟ್ಟ ಬಗ್ಗೆ ನನಗೆ ಖಾತರಿಯಾದ ನಂತರವೇ ಮಾರಾಟ ಎಂದು ನಾನು ತೀರ್ಮಾನಿಸಿದ್ದೆ. ಈಗ ಹನ್ನೊಂದು ತಿಂಗಳ ಉಪಯೋಗ ನನಗೆ ಇದರ ಗುಣಮಟ್ಟದ ಬಗ್ಗೆ ದೈರ್ಯ ಕೊಟ್ಟಿದೆ. ಸಾಮಾನ್ಯ ಬದಲಿಸುವಂತಹ ಎಲ್ಲ ಸಾಮಾನುಗಳು ನಮ್ಮ ದ್ವಿ-ಚಕ್ರ ವಾಹನಗಳ ಬಿಡಿ ಬಾಗಗಳು ಹೊಂದುತ್ತವೆ.

ಬಾಯಾರಿದವನಿಗೆ ನೀರಿನ ರುಚಿ ಎಂಬಂತೆ ನನ್ನಂತಹ ವ್ಯಕ್ತಿಗಳಿಗೆ ನನ್ನ ಮೊದಲ ಅಧ್ಯತೆ. ಇವು ನಮ್ಮ ದೇಶದಲ್ಲಿ ತಯಾರಾಗುವುದಿಲ್ಲ. ವ್ಯಾಪಾರಿಗಳು ಹೇಳಿದ್ದೇ ಕ್ರಯ. ಒಂದೆರಡು ವಾಹನಗಳ ಪರದೇಶದಿಂದ ತರಿಸುವುದು ನಿಜಕ್ಕೂ ತಲೆಹರಟೆ ಕೆಲಸ. ನನಗೆ ಹೃದಯ ಚಿಕಿತ್ಸೆ ಆಗಿದೆ, ತೋಟಕ್ಕೆ ಹೋಗಲು ಸಾದ್ಯವಾಗುತ್ತಿಲ್ಲ ಎಂದೊಬ್ಬರು ಪರರಾಜ್ಯದಿಂದ ಪತ್ರಿಸಿದ್ದರು. ಅವರಿಗೆ ಸೂಕ್ತ ಸಲಹೆ ಸೂಚನೆಗಳನ್ನಿತ್ತೆ. ಅದುದರಿಂದ ನನ್ನಂತವರು ಸಂಪರ್ಕಿಸಿದರೆ ಅವರಿಗಾಗಿ ಉಳಿಯಲಿ ಎನ್ನುವ ನೆಲೆಯಲ್ಲಿ ಮಾರಾಟಕ್ಕೆ ಹೆಚ್ಚು ಆಸಕ್ತಿ ವಹಿಸುತ್ತಿಲ್ಲ.

ಹಾಗೆಂದು ಇವುಗಳಿಗೆ ಇರಬಹುದಾದ ಮಾರುಕಟ್ಟೆ ಬಹಳ ಸಿಮಿತವಾದುದು. ತಿಂಗಳಿಗೆ ಹತ್ತಾರು ಮಾರುವಂತಹ ವಾಹನ ಇದಲ್ಲ. ಪರಿಸರಕ್ಕೆ ಹಾನಿ ಮಾಡುವ ವಾಹನಗಳು ಸಾಮಾನ್ಯವಾಗಿ ನನಗೆ ಸಮ್ಮತವಲ್ಲವಾದರೂ ಇವು ಅಂಗವಿಲಕರ ಗಾಲಿ ಕುರ್ಚಿಯ ತರಗತಿಗೆ ಸೇರುವಂತಹದ್ದು ಎನ್ನುವ ಸಮದಾನ.

ವಾರಂಟಿ, ಕಸ್ಟಮರ್ ಸಪೋರ್ಟ್ ಎಂದು ತಲೆಕೆಡಿಸಿಕೊಳ್ಳಲು ನನಗೆ ಅಸಕ್ತಿಯಾಗಲಿ ಸಮಯವಾಗಲಿ ಇಲ್ಲ. ನಮ್ಮ ತೋಟಕ್ಕೆ ಹೋಗಲು ಕಷ್ಟ ಪಡುವವ ಇದನೆಲ್ಲ ಎಳೆದಾಕಿಕೊಳ್ಳುವ ಉಸಾಬರಿ ನನಗೇತಕೆ ?














ನನ್ನ ದೋರಣೆ ಅನಿಸಿಕೆಗಳ ರೀತಿಯಲ್ಲಿಯೇ ಈ ವ್ಯಂಗ್ಯ ಚಿತ್ರ ಕಂಡು ಅನಿಸಿಕೆ ಹಾಗೂ ಚಿತ್ರ ಎರಡನ್ನೂ ಹಂಚಿಕೊಳ್ಳುತ್ತಿದ್ದೇನೆ.

ಅಲ್ಲೂ ಉಂಟು ಹಳ್ಳಿಯಿಂದ